ಕೊಳ್ಳಿರಿ ಈರುಳ್ಳಿ ದರ ಹೊರೆ ಇಳಿಸಲು kgಗೆ25 ರೂ. ರಿಯಾಯತಿ
ಈರುಳ್ಳಿ ಬೆಲೆ ಏರಿಕೆ ತಡೆಗಾಗಿ ರಫ್ತು ವಹಿವಾಟು ತಗ್ಗಿಸಲು ಕೇಂದ್ರ ಸರಕಾರವು ಶೇಕಡಾ 40ರಷ್ಟು ಸುಂಕ ವಿಧಿಸಿದ್ದು, ರೈತರು ಮತ್ತು ವರ್ತಕರ ಹಿತಾಸಕ್ತಿ ಕಾಪಾಡಲು ಪ್ರತಿ ಕ್ವಿಂಟಲ್ ಈರುಳ್ಳಿಯನ್ನು 2,410 ರೂಪಾಯಿ ದರದಲ್ಲಿ ಖರೀದಿಸಲು ಮುಂದಾಗಿದೆ. ಅಲ್ಲದೇ ಗ್ರಾಹಕರಿಗೆ ಈರುಳ್ಳಿ ದರ ಏರಿಕೆಯ ಹೊರೆ ತಪ್ಪಿಸಲು ಕೆ.ಜಿಗೆ 25 ರೂ.ನಂತೆ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುವುದು ಎಂದೂ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಹೊಸದಿಲ್ಲಿ: ಈರುಳ್ಳಿ ಬೆಲೆ ಏರಿಕೆ ತಡೆಗಾಗಿ ರಫ್ತು ವಹಿವಾಟು ತಗ್ಗಿಸಲು ಕೇಂದ್ರ ಸರಕಾರವು ಶೇ. 40ರಷ್ಟು ಸುಂಕ ವಿಧಿಸಿದೆ. ಏತನ್ಮಧ್ಯೆ, ”ರೈತರು ಮತ್ತು ವರ್ತಕರ ಹಿತಾಸಕ್ತಿ ಕಾಪಾಡಲು ಕೇಂದ್ರವು ಪ್ರತಿ ಕ್ವಿಂಟಲ್‌ಗೆ 2,410 ರೂ.ಗೆ ಈರುಳ್ಳಿ ಖರೀದಿಸಲು ಮುಂದಾಗಿದೆ,” ಎಂದು ಕೇಂದ್ರ ವಾಣಿಜ್ಯ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಶ್ ಗೋಯಲ್ ಮಂಗಳವಾರ ತಿಳಿಸಿದ್ದಾರೆ.
ಅಲ್ಲದೇ, ಗ್ರಾಹಕರಿಗೆ ಈರುಳ್ಳಿ ದರ ಏರಿಕೆಯ ಹೊರೆ ತಪ್ಪಿಸಲು ಕೆ.ಜಿಗೆ 25 ರೂ.ನಂತೆ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುವುದು ಎಂದೂ ಸಚಿವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪಿಯೂಶ್ ಗೋಯಲ್, “ಈರುಳ್ಳಿ ರಫ್ತು ನೀತಿ ಕುರಿತಾಗಿ ರೈತರು ಮತ್ತು ವರ್ತಕರು ಆತಂಕ ಪಡುವ ಅಗತ್ಯವಿಲ್ಲ. ಎನ್‌ಸಿಸಿಎಫ್ ಮತ್ತು ನಾಫೇಡ್ ಮೂಲಕ 3 ಲಕ್ಷದ ಬದಲು 5 ಲಕ್ಷ ಟನ್ ಈರುಳ್ಳಿಯನ್ನು ಖರೀದಿಸಲಾಗುವುದು. ಪ್ರತಿ ಕ್ವಿಂಟಾಲ್‌ಗೆ 2,410 ರೂ.ನಂತೆ ಎರಡು ಲಕ್ಷ ಟನ್ ಈರುಳ್ಳಿ ಖರೀದಿಸಲಾಗುವುದು,” ಎಂದು ತಿಳಿಸಿದ್ದಾರೆ
”ಗ್ರಾಹಕರು ಮತ್ತು ರೈತರು ಇಬ್ಬರೂ ನಮಗೆ ಅಮೂಲ್ಯ. ಸರಕಾರದ ನೀತಿಯಿಂದ ನಮ್ಮ ಅನ್ನದಾತರಿಗೆ (ರೈತರು) ಉತ್ತಮ ಬೆಲೆ ಸಿಗುತ್ತದೆ. ಎಲ್ಲಾ ರೈತರು ತಮ್ಮ ಈರುಳ್ಳಿಯನ್ನು ಸರಕಾರಕ್ಕೆ ಉತ್ತಮ ಬೆಲೆಗೆ ಮಾರಾಟ ಮಾಡಲು ನಾನು ಆಹ್ವಾನಿಸುತ್ತೇನೆ,” ಎಂದು ಸಚಿವರು ಹೇಳಿದ್ದಾರೆ.
ಭಾರತೀಯರ ಅಡುಗೆಮನೆಯ ಅತ್ಯಗತ್ಯ ತರಕಾರಿಯಾದ ಈರುಳ್ಳಿ ದರದಲ್ಲಿ, ಹಬ್ಬದ ಸೀಸನ್‌ಗೆ ಮುಂಚಿತವಾಗಿ ಹಠಾತ್ ಏರಿಕೆ ಕಂಡು ಬಂದಿದೆ. ಈರುಳ್ಳಿಯ ಮುಂಗಾರು ಬೆಳೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಏರುತ್ತಿರುವ ಬೆಲೆಗಳಿಗೆ ನಿಯಂತ್ರಣ ಹಾಕಲು ಮತ್ತು ಸ್ಥಳೀಯ ಲಭ್ಯತೆಯನ್ನು ಹೆಚ್ಚಿಸಲು ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕವನ್ನು ಕೇಂದ್ರ ಸರಕಾರ ವಿಧಿಸಿದೆ. ಇದನ್ನು ವಿರೋಧಿಸಿರುವ ಈರುಳ್ಳಿ ಮಾರಾಟಗಾರರು, ”ಸರಕಾರವು ತನ್ನ ನೀತಿಯನ್ನು ಹಿಂಪಡೆಯಬೇಕು. ಕೇಂದ್ರದ ದಿಢೀರ್ ತೀರ್ಮಾನದಿಂದ ನಷ್ಟವಾಗುತ್ತಿದೆ,” ಎಂದಿದ್ದಾರೆ.
ವರ್ತಕರ ಮುಷ್ಕರ ಮುಂದುವರಿಕೆ
ಈರುಳ್ಳಿ ರಫ್ತು ನೀತಿ ವಿರೋಧಿಸಿ ಮಹಾರಾಷ್ಟ್ರದ ವಿವಿಧೆಡೆ ವರ್ತಕರು ಮತ್ತು ರೈತರು ಕಳೆದ ಎರಡು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲ ಎಪಿಎಂಸಿ, ದೇಶದ ಬೃಹತ್ ಸಗಟು ಈರುಳ್ಳಿ ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿದೆ. ಈಗ ಕೇಂದ್ರ ಸರಕಾರ ಭರವಸೆಯ ಮಾತುಗಳನ್ನಾಡಿದೆ.
ಖರೀದಿ ಶಕ್ತಿಯಿಲ್ಲದವರು, ಒಂದೆರಡು ತಿಂಗಳು ಸುಮ್ಮನಿರಲಿ
“ಎರಡರಿಂದ ನಾಲ್ಕು ತಿಂಗಳು ಈರುಳ್ಳಿ ತಿನ್ನದೇ ಇದ್ದರೆ ಜನರಿಗೆ ಏನೂ ವ್ಯತ್ಯಾಸವಾಗದು. ಜನರು 10 ಲಕ್ಷ ರೂ. ಬೆಲೆಯ ವಾಹನ ಖರೀದಿಸಬಹುದಾದರೆ, ಈರುಳ್ಳಿಯನ್ನೂ ಖರೀದಿಸಬಹುದು. ಈರುಳ್ಳಿ ಖರೀದಿಸುವಷ್ಟು ಹಣವಿಲ್ಲದೇ ಇರುವವರು ಅದನ್ನು ಎರಡರಿಂದ ನಾಲ್ಕು ತಿಂಗಳು ತಿನ್ನದೇ ಇದ್ದರೆ ಏನೂ ವ್ಯತ್ಯಾಸವಾಗದು,” ಎಂದು ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ದಾದಾ ಭುಸೆ ಹೇಳಿದ್ದಾರೆ. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
